ಬಾಗಲಕೋಟೆ
ಭಾರತದ ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ರಾಜ್ಯದ ವಾಯವ್ಯದಲ್ಲಿರುವ ಈ ಜಿಲ್ಲೆಯನ್ನು ಪೂರ್ವದಲ್ಲಿ ಬಿಜಾಪುರ, ಆಗ್ನೇಯದಲ್ಲಿ ರಾಯಚೂರು, ದಕ್ಷಿಣದಲ್ಲಿ ಕೊಪ್ಪಳ ಮತ್ತು ಗದಗ ಪಶ್ಚಿಮ ಮತ್ತು ಉತ್ತರದಲ್ಲಿ ಬೆಳಗಾಂವಿ ಜಿಲ್ಲೆಗಳು ಸುತ್ತುವರಿದಿವೆ. ಬಿಜಾಪುರ ಜಿಲ್ಲೆಯ ನೈರುತ್ಯ ಹಾಗೂ ಪಶ್ಚಿಮದಲ್ಲಿ ಸೇರಿದ್ದ ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಮುಧೋಳ ಮತ್ತು ಜಮಖಂಡಿ ತಾಲ್ಲೂಕುಗಳನ್ನು ಬೇರ್ಪಡಿಸಿ ಭಾರತ ಸ್ವಾತಂತ್ರ್ಯೋತ್ಸವದ 50ನೇ ವರ್ಷ 15, ಆಗಸ್ಟ್ 1997ರಂದು ಬಾಗಲಕೋಟೆ ಜಿಲ್ಲೆಯನ್ನು ರಚಿಸಲಾಯಿತು. ಆರು ತಾಲ್ಲೂಕುಗಳ, 18 ಹೋಬಳಿಗಳಿದ್ದು ಬೆಳಗಾಂವಿ ಕಂದಾಯ ವಿಭಾಗಕ್ಕೆ ಸೇರಿರುವ ಈ ಜಿಲ್ಲೆಯನ್ನು ಆಡಳಿತಾನುಕ್ಕೂಲಕ್ಕೆ ಬಾಗಲಕೋಟೆ ಮತ್ತು ಜಮಖಂಡಿ ಎಂದು ಎರಡು ಭಾಗವಾಗಿ ವಿಂಗಡಿಸಿದೆ. ಸಮುದ್ರ ಮಟ್ಟದಿಂದ 450 ರಿಂದ 800 ಮೀಟರುಗಳ ಎತ್ತರದಲ್ಲಿರುವ ಈ ಜಿಲ್ಲೆಯ ಒಟ್ಟು ಭೂವಿಸ್ತಾರ 6593. ಚ.ಕಿ.ಮೀ. ಜನಸಂಖ್ಯೆ 16,52,232 (2001) ಜಿಲ್ಲಾ ಆಡಳಿತ ಕೇಂದ್ರ ಪಟ್ಟಣ ಬಾಗಲಕೋಟೆ, 91,596 (2001).

ಈ ಜಿಲ್ಲೆಯ ಪೂರ್ವಭಾಗ ದಖನ್ ಪ್ರಸ್ಥಭೂಮಿಯ ಶುಷ್ಕ ವಲಯಕ್ಕೆ ಸೇರಿದೆಯನ್ನಬಹುದು. ದಖನ್ ಟ್ರ್ಯಾಪ್, ಕಲಾದಗಿ ಶಿಲಾವರ್ಗ ಈ ಭಾಗದಲ್ಲಿ ಕಂಡು ಬರುವುದು. ಹುನಗುಂದ ತಾಲ್ಲೂಕಿನಲ್ಲಿ ಸ್ಥಳೀಯ ನೈಸ್ ಶಿಲಾಗುಡ್ಡಗಳು ಮತ್ತು ಇತರ ರೂಪಾಂತರ ಶಿಲಾವರ್ಗಗಳಿವೆ. ಕೃಷ್ಣಾನದಿಯ ಬಳಿ ಸಣ್ಣ ಗುಡ್ಡಗಳಿವೆ. ಉತ್ತರ ಮಲಪ್ರಭಾ ಶ್ರೇಣಿ ಎಂದು ಕರೆಯುವ ಶಿಲಾಸ್ತರಗಳು ಮಡ್ಡಿ ಮತ್ತು ಸ್ವಲ್ಪಮಟ್ಟಿನ ರೂಪಾಂತರಿತ ಶಿಲೆಗಳಿಂದ ಕೂಡಿವೆ. ಬಾದಾಮಿ ಗುಡ್ಡ ಸಮೂಹಗಳು ಕೆಂಪು ಮರಳು ಕಲ್ಲುಗಳಿಂದ ಕೂಡಿವೆ. ಈ ಜಿಲ್ಲೆ ಕೃಷ್ಣಾ ಮಲಪ್ರಭ ನದಿಗಳ ಮಧ್ಯಭೂಮಿಯಾಗಿದೆ. ಪ್ರವಾಹ ತಂದು ಹಾಕುವ ಮೆಕ್ಕಲು ಮಣ್ಣಿನಿಂದ ವ್ಯವಸಾಯಕ್ಕೆ, ತೋಟಗಾರಿಕೆಗೆ ಅನುಕೂಲವಾಗಿದೆ. ಇಲ್ಲಿನ ಗ್ರಾಮಗಳು 

ಸಂಪದ್ಭರಿತವಾಗಿವೆಯೆನ್ನಬಹುದು. ಅಲ್ಲಲ್ಲಿ ಕುರುಚಲು ಕಾಡುಗಳಿವೆ. ಖುಷ್ಕಿ ಬೆಳೆ ಹೆಚ್ಚು ಬೆಳೆಯುವರು, ಕುರಿ ಸಾಕಾಣೆಯಿದೆ. ಮಳೆ ತೃಪ್ತಿಕರವಾಗಿ ಬಂದರೆ ಗೋಧಿ ಮತ್ತು ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ಕೃಷ್ಣಾನದಿ ಜಿಲ್ಲೆಯ ಉತ್ತರದಲ್ಲಿ ಹರಿಯುವುದರಿಂದ ಮಳೆಗಾಲದಲ್ಲಿ ಪ್ರವಾಹ ಹೆಚ್ಚಾಗಿ ಕೆಲವೊಮ್ಮೆ ಮೆಕ್ಕಲು ಮಣ್ಣನ್ನು ಹರಡುವುದು. ಮಳೆ ಕಡಿಮೆಯಾಗಿ ಪ್ರವಾಹ ಇಳಿಮುಖವಾದಾಗ ನದಿಯ ದಕ್ಷಿಣ ಭಾಗದ ಉದ್ದಕ್ಕೂ ಬೇಸಾಯಕ್ಕೆ ಅನುಕೂಲವಾದ ಪ್ರದೇಶ ದಕ್ಕುವುದು. ನೀರಿನ ಹರಿವಿನಿಂದ ಸುಣ್ಣಕಲ್ಲು ಪ್ರದೇಶಗಳಲ್ಲಿ ಭೂ ಸವೆತ ಉಂಟಾಗುವುದು. ಹುನಗುಂದದ ಬಯಲು ಮತ್ತು ಬಾದಾಮಿ ಪ್ರದೇಶಗಳಲ್ಲಿ ಕುರುಚಲು ಕಾಡುಗಳನ್ನು ನೋಡಬಹುದು.

ಕೃಷ್ಣ, ಮಲಪ್ರಭಾ, ಘಟಪ್ರಭಾ ಇಲ್ಲಿನ ಮೂರು ಮುಖ್ಯನದಿಗಳು. ಜಮಖಂಡಿ ತಾಲ್ಲೂಕಿನ ಮುತ್ತೂರ ಬಳಿ ಕೃಷ್ಣ ನದಿ ಈ ಜಿಲ್ಲೆಯನ್ನು ಮುಟ್ಟುತ್ತದೆ. ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ, ಬಿಜಾಪುರ ಮತ್ತು ಮುದ್ದೇಬಿಹಾಳ ತಾಲ್ಲೂಕುಗಳನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ, ಬಾಗಲಕೋಟೆ, ಮತ್ತು ಹುನಗುಂದ ತಾಲ್ಲೂಕುಗಳನ್ನು ಬೇರ್ಪಡಿಸಿದೆ. ಮಲಪ್ರಭಾನದಿ ಈ ಜಿಲ್ಲೆಯ ಬಾದಾಮಿ ತಾಲ್ಲೂಕಿನಲ್ಲಿ ಪ್ರವೇಶಿಸಿ ಪೂರ್ವಾಭಿಮುಖವಾಗಿ ಸು.32. ಕಿಮೀ ನಷ್ಟು ದೂರ ಹರಿದು ಗದಗ ಜಿಲ್ಲೆಯನ್ನು ಬೇರ್ಪಡಿಸುತ್ತದೆ. ಮುಂದೆ ಈಶಾನ್ಯಭಿಮುಖವಾಗಿ ಹರಿದು ಹುನಗುಂದ ತಾಲ್ಲೂಕಿನ ಕೂಡಲ ಸಂಗಮದಲ್ಲಿ ಕೃಷ್ಣನದಿಯನ್ನು ಕೂಡಿಕೊಳ್ಳುತ್ತದೆ. ಮಲಪ್ರಭಾನದಿ ದಂಡೆಯಲ್ಲಿ ಪ್ರಸಿದ್ಧವಾದ ಐಹೊಳೆ, ಪಟ್ಟದಕಲ್ಲು  ಪ್ರದೇಶಗಳಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ಸು.112 ಕಿ.ಮೀ. ದೂರ ಹರಿಯುವ ಘಟಪ್ರಭಾ ನದಿ ಪೂರ್ವದಿಕ್ಕಿನತ್ತ ಹರಿದು ಬಾಗಲಕೋಟೆ ಬಳಿ ಉತ್ತರಕ್ಕೆ ತಿರುಗಿ ಚಿಮ್ಮಲಗಿ ಬಳಿ ಕೃಷ್ಣ ನದಿ ಸೇರುತ್ತದೆ. ಜಿಲ್ಲೆಯ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ಕುರುಚು ಮತ್ತು ಮುಳ್ಳು ಗಿಡಗಳು ಕಂಡು ಬರುತ್ತವೆ. ಇಲ್ಲಿನ ಅರಣ್ಯಗಳಲ್ಲಿ ಕಕ್ಕೆ, ದಿಂಡಲು, ಗಂಧ, ನೇರಳೆ, ಆಲ ಹಾಗೂ ಬೇವು, ಹುಣಿಸೆ, ಮರಗಳಿವೆ. ಅರಣ್ಯಗಳಲ್ಲಿ ಕಾಡುಹಂದಿ, ಕಾಡು ಬೆಕ್ಕು, ಕತ್ತೆ ಕಿರುಬ, ತೋಳ, ನರಿ ಚಿಗುರೆ, ಮೊಲ, ಮಂಗ ಮೊದಲಾದ ಪ್ರಾಣಿಗಳೂ, ನವಿಲು, ಕ್ರೌಂಚ, ಕವುಜಗ, ಪಾರಿವಾಳ, ಕಾಡುಕೋಳಿ, ಕಬ್ಬಾರೆ ಮೊದಲಾದ ಪಕ್ಷಿಗಳೂ, ಹೆಬ್ಬಾವು, ಮಣ್ಣು ಮುಕ್ಕ, ನಾಗರ, ಕೇರೆಹಾವು, ಮೊದಲಾದ ಹಾವುಗಳು, ಕೆರೆ, ನದಿಗಳಲ್ಲಿ ಮೀನು ಮುಂತಾದ ಜಲಚರ ಪ್ರಾಣಿಗಳೂ ಇವೆ. 

ಬಾಗಲಕೋಟೆ ಬಳಿ ನಸುಗೆಂಪು, ಹಸಿರು, ನೇರಳೆ, ಬೂದ ಮತ್ತು ಕೆನೆಬಣ್ಣದ ಸುಣ್ಣದ ಕಲ್ಲಿನ ನಿಕ್ಷೇಪಗಳಿವೆ. ಪಟ್ಟದಕಲ್ಲಿನ ಬಳಿ ಗ್ರಾನೈಟ್ ಶಿಲೆಗಳು ದೊರಕುತ್ತವೆ. ಬಾಗಲಕೋಟೆ ಬಳಿ ಗಾಜು ತಯಾರಿಕೆಗೆ ಬೇಕಾದ ಮರಳು ಮತ್ತು ಬಳಪದ ಕಲ್ಲುಗಳ ನಿಕ್ಷೇಪವಿದೆ. ಸಾಮಾನ್ಯವಾಗಿ ಕಪ್ಪು ಮತ್ತು ಎರೆ ಮಣ್ಣಿನಿಂದ ಈ ಪ್ರದೇಶ ಕೂಡಿದ್ದರೂ ಬಾಗಲಕೋಟೆ, ಬಾದಾಮಿ, ಹುನಗುಂದ ಈ ತಾಲ್ಲೂಕುಗಳಲ್ಲಿ ಕೆಂಪು ಮಸಾರಿ ಮಣ್ಣು ಹೆಚ್ಚಾಗಿದೆ. ಕೆರೆ, ಕುಂಟೆ, ಕಾಲುವೆಗಳ ಪ್ರದೇಶಗಳಲ್ಲಿ ನೀರಾವರಿ ಬೆಳೆ ತೆಗೆಯುತ್ತಾರೆ. ಕಬ್ಬು, ಬತ್ತ, ಹಣ್ಣುಗಳು, ತರಕಾರಿಗಳು, ಕೊತ್ತಂಬರಿ, ಮೆಣಸಿನಕಾಯಿ, ಅರಸಿನ, ಬೆಳ್ಳುಳ್ಳಿ, ಈರುಳ್ಳಿ, ತೊಗರಿ, ಹುರಳಿ, ಹೆಸರು, ಅವರೆ, ಹೊಗೆಸೊಪ್ಪು ಇವುಗಳನ್ನು ಬೆಳೆಯುತ್ತಾರೆ.

ಕೈಗಾರಿಕೆಯಲ್ಲಿ ಬಾಗಲಕೋಟೆ ಹೆಸರು ಮಾಡಿದೆ. ಇಲ್ಲಿನ ಸಿಮೆಂಟ್ ಕಲ್ನಾರು ಛಾವಣಿ ತಯಾರಿಕೆ ಪ್ರಸಿದ್ಧವಾದದ್ದು. ಸ್ಲೇಟುಗಳು, ಗಾಜಿನ ಬಳೆ, ಪಾಲಿಥೀನ್ ಚೀಲ, ವಿವಿಧ ಬೀಗಗಳು, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳ ತಯಾರಿಕೆ ಹತ್ತಿ ಎಕ್ಕುವ ಕಾರ್ಖಾನೆಗಳು, ಹತ್ತಿ ಗಿರಣಿಗಳು, ಹತ್ತಿ ಗಿರಣಿಗಳು ಇದ್ದು ಜಿಲ್ಲೆಯಲ್ಲಿ ಕೈಗಾರಿಕಾ ಚಟುವಟಿಕೆ ಅಭಿವೃದ್ಧಿ ಪಥದಲ್ಲಿದೆ. ಕೈಗಾರಿಕಾ ಮತ್ತು ವಾಣಿಜ್ಯ ಬ್ಯಾಂಕುಗಳು ಇಲ್ಲಿನ ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಿವೆ. ಇವುಗಳ ಜೊತೆಗೆ ವಿವಿಧ ಸಹಕಾರಿ ಬ್ಯಾಂಕುಗಳಿವೆ.

2001ರ ಅಂಕಿ ಅಂಶದ ಪ್ರಕಾರ ಬಾಗಲಕೋಟೆ ಜಿಲ್ಲೆಯಲ್ಲಿ 8,ಲ35,684 ಮಂದಿ ಗಂಡಸರು, 8,16,548 ಮಂದಿ ಮಹಿಳೆಯರೂ ಇದ್ದಾರೆ. ಇದರಲ್ಲಿ 1,31,239 ಗಂಡು ಮಕ್ಕಳೂ 1,23,240 ಹೆಣ್ಣು ಮಕ್ಕಳೂ ಸೇರಿವೆ. ಓದು ಬರಹ ತಿಳಿದ 5,02,308 ಮಂದಿ ಗಂಡಸರು, 3,05,761 ಮಂದಿ ಮಹಿಳೆಯರೂ ಇದ್ದು ಒಟ್ಟು 8,08,069 ಮಂದಿ ಸಾಕ್ಷರಿದ್ದಾರೆ. ಇದಕ್ಕೆ ಪೂರಕವಾಗಿ ಶಾಲಾ, ಕಾಲೇಜುಗಳಿವೆ. ಜಿಲ್ಲೆಯಲ್ಲಿ ರಸ್ತೆ, ರೈಲು ಮಾರ್ಗ ಸಂಪರ್ಕವಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ